ಮಂಗಳವಾಡ
	ಇತಿಹಾಸಪ್ರಸಿದ್ಧ ಸ್ಥಳ. ಕಲಚುರಿ ಮನೆತನದವರ ರಾಜಧಾನಿಯಾಗಿದ್ದ ಈ ಸ್ಧಳ ಈಗ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಹಾಗೂ ಪಂಢರಪುರಗಳ ಮಧ್ಯದಲ್ಲಿದೆ (ಬಸ್‍ಮಾರ್ಗ). ಶಾಸನಗಳಲ್ಲಿ ಮಂಗಳವೇಡವೆಂತಲೂ ಹರಿಹರನ ಬಸವರಾಜರಗಳೆಯಲ್ಲಿ ಮಂಗಳವಾಡವೆಂತಲೂ ಕರೆಯಲಾಗಿದೆ. ಈಗ ಇದು ಮಂಗಳವೇಡೆ ಎನಿಸಿದೆ. ಒಂದು ಕಾಲಕ್ಕೆ ಕನ್ನಡದ ಕೇಂದ್ರವಾಗಿದ್ದ ಈ ಸ್ಥಳ ಸಂಪದ್ಬರಿತವಾಗಿತ್ತು. ಹತ್ತಿರದಲ್ಲಿ ಮಾಣನದಿ ಹರಿಯುತ್ತಿದೆ. ಇಲ್ಲಿರುವ ಮಂಗಳಾದೇವತೆಯಿಂದಾಗಿ ಊರಿಗೆ ಈ ಹೆಸರು ಬಂದಿರಬೇಕು. ಇಲ್ಲಿಯ ಅವಶೇಷಗಳನ್ನು ಗಮನಿಸಿದಾಗ ಜ್ಯೆನ, ಶೈವ, ವೈóಷ್ಣವ ಹಾಗೂ ಶಾಕ್ತ ಮತಗಳ ಕೇಂದ್ರವಾಗಿತ್ತೆಂದು ತಿಳಿದುಬರುತ್ತದೆ. ಪಾಶ್ರ್ವನಾಥ ಮೊದಲಾದ ತೀರ್ಥಂಕರರ, ನಟರಾಜ, ಭೈರವ, ದುರ್ಗಾ, ಮಹಿಷಾಸುರಮರ್ದಿನಿ, ವಿಷ್ಣು, ಬ್ರಹ್ಮ, ಶಿವ-ಪಾರ್ವತಿ ಮುಂತಾದ ಹಲವು ಮೂರ್ತಿಗಳು ಅಲ್ಲಲ್ಲಿ ಭಗ್ನಾವಸ್ಥೆಯಲ್ಲಿ ಬಿದ್ದಿದೆ. ಎಂಟು ಶಾಸನಗಳು ದೊರೆತಿದ್ದು ಇಲ್ಲಿ ಹಲವು ರಾಜಮನೆತನಗಳ ಆಡಳಿತವಿದ್ದುದು ಸ್ವಷ್ಟವಾಗುತ್ತದೆ. ಎರಡು ಶಾಸನಗಳು ಬಿಜ್ಜಳನ ಅಜ್ಜ ಜೋಗಮರಸನಿಗೆ ಸಂಬಂಧಿಸಿದ್ದರೆ ಒಂದು ಶಾಸನ ಜೋಗಮರಸನ ತಂದೆ ಮಹಾಮಂಡಲೇಶ್ವರ ಕನ್ನಮಯ್ಯನಿಗೆ (ಕೃಷ್ಣ-1067) ಸಂಬಂಧಿಸಿದೆ. ಒಂದು ಶಾಸನ ಸೇವುಣ ಚಕ್ರವರ್ತಿ ಇಮ್ಮಡಿ ಸಿಂಘಣನಿಗೆ ಸಂಬಂಧಿಸಿದೆ. ಈ ಶಾಸನಗಳ ಅವಲೋಕನದಿಂದ ಇಲ್ಲಿ ತ್ರಿಪುರಾಂತಕೇಶ್ವರ, ಭೋಗೇಶ್ವರ, ಸಮಂತಕೇಶ್ವರ, ನಾರಾಯಣ, ಗೋಪಕೇಶ್ವರ, ರೇವಣಸಿದ್ದೇಶ್ವರ ಮುಂತಾದ ದೇವಾಲಯಗಳಿದ್ದ ಸಂಗತಿ ವ್ಯಕ್ತವಾಗುತ್ತದೆ. ಮರಾಠ ಹಾಗೂ ಮುಸ್ಲಿಮರ ಆಳ್ವಿಕೆಯಲ್ಲಿ ಕೆಲವು ದೇವಾಲಯಗಳು, ದರ್ಗಾ ಹಾಗೂ ಮಸೀದಿಗಳು ಅಸ್ತಿತ್ವಕ್ಕೆ ಬಂದಿವೆ. ಇವುಗಳಲ್ಲಿ ದಾಮಾಜಿ, ತುಕಾಯೀ, ಗಣೇಶ ಮತ್ತು ಖಂಡೋಬ ಪ್ರಸಿದ್ಧವಾಗಿವೆ.
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ